ಪಶ್ಚಿಮ ಘಟ್ಟಗಳು -
	ದಕ್ಷಿಣ ಭಾರತದ ಪಶ್ಚಿಮ ಕರಾವಳಿಗೆ ಸಮೀಪದಲಿ,್ಲ ತಪತಿ ನದಿಯ ಬಳಿಯಿಂದ ಕನ್ಯಾಕುಮಾರಿಯ ವರೆಗೆ ಸುಮಾರು 1.300 ಕಿಮೀ. ದೂರ ಹಬ್ಬಿರುವ ಪರ್ವತಶ್ರೇಣಿ ಸಹ್ಯಾದ್ರಿ ಎಂದೂ ಇದಕ್ಕೆ ಹೆಸರಿದೆ. ದಕ್ಷಿಣದ ಪಾಲಘಾಟ್ ತೆರಪಿನ ವಿನಾ ಅವಿಚ್ಛಿನ್ನವಾಗಿ ಸಾಗಿರುವ ಈ ಘಟ್ಟಗಳು ಮಹಾರಾಷ್ಟ್ರ, ಗೋವ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಭಾಗಗಳಲ್ಲಿ ಹರಡಿವೆ.

	ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ ರಾಜ್ಯದ ಉತ್ತರ ತುದಿಯಲ್ಲಿ ತಪತಿ ನದಿ ಕಣಿವೆಯ ಕುಂದೈಬಾರಿ ಬಳಿ (ಉ.ಆ 2106' ಮತ್ತು ಪೂ. ರೇ. 74011') ಪ್ರಾರಂಭವಾಗಿ ಸಮುದ್ರಮಟ್ಟಕ್ಕೆ ಸರಾಸರಿ 1,220 ಮೀ ಎತ್ತರದೊಳಗೆ ಸಾಗಿವೆ. ಸಮುದ್ರಕ್ಕೂ ಘಟ್ಟಗಳಿಗೂ ಅಂತರ 32ರಿಂದ 104 ಕಿಮೀ. ಪ್ರಾರಂಭದ ಸ್ಥಳದಿಂದ ತ್ರಿಯಂಬಕ್ ಕಣಿವೆಯ ವರೆಗೆ ಘಟ್ಟಗಳ ಹರವು 160 ಕಿಮೀ. ಆ ಭಾಗದಲ್ಲಿ ಪಶ್ಚಿಮದಿಂದ ದಕ್ಷಿಣಕ್ಕೆ ದಟ್ಟವಾದ ಅರಣ್ಯದಿಂದ ಕೂಡಿದ ಪೀಂತ್, ಮೊಖಾಡ ಮತ್ತು ಜವಹಾರ್ ಬೆಟ್ಟಗಳಿವೆ. ಪಶ್ಚಿಮದ ಕಡೆ ಆಳವಾದ ಕಮರಿಗಳಿವೆ. ಇಲ್ಲಿಯ ಬೆಟ್ಟಗಳು ಕೊಂಕಣದ ಇಳುಕಲು ಭೂಮಿಗೂ ದಖನ್‍ಗೂ ನಡುವೆ ಗೋಡೆಗಳಂತಿವೆ. ಇಲ್ಲಿಂದ ಮುಂದಕ್ಕೆ ಘಟ್ಟಗಳು ಮಾಲ್ಸೆಜ್ ಕಣಿವೆಯ ವರೆಗೆ 64 ಕಿಮೀ. ದೂರ ದಕ್ಷಿಣದಿಂದ ಆಗ್ನೇಯಕ್ಕೂ ಅಲ್ಲಿಂದ ಖಂಡಾಲ ಹಾಗೂ ವಾಗ್ಜೈವರೆಗೆ 96 ಕಿಮೀ. ದೂರ ನೈಋತ್ಯದ ಕಡೆಗೂ ಸಾಗಿ, ಮಹಾರಾಷ್ಟ್ರದ ಗಡಿಯನ್ನು ದಾಟುವವರೆಗೆ ಪುನಃ ಆಗ್ನೇಯದ ಕಡೆ ಹಬ್ಬಿವೆ.

	ಪಶ್ಚಿಮ ಘಟ್ಟಗಳ ಉದ್ದಕ್ಕೂ ಪೂರ್ವ ಭಾಗಕ್ಕೆ ಹಲವು ಚಾಚುಗಳ ಹಾಗೂ ಉಪಶ್ರೇಣಿಗಳ ಹರಡಿವೆ. ಮಹಾರಾಷ್ಟ್ರದಲ್ಲಿ ಪೂರ್ವದ ಕಡೆ ಹಬ್ಬಿರುವ ಉಪಶ್ರೇಣಿಗಳು ಗೋದಾವರಿ, ಭೀಮಾ ಮತ್ತು ಕೃಷ್ಣಾ ನದಿಗಳು ಕಣೆವೆಗಳನ್ನು ವಿಭಜಿಸಿವೆ. ತಪತಿ ಮತ್ತು ಗೋದಾವರಿ ಕಣೆವೆಗಳ ನಡುವೆ ಸಾತ್‍ಮಾಲಾ ಶ್ರೇಣಿಯಿದೆ. ಹರಿಶ್ಚಂದ್ರಗಢದ ಬಳಿ ಆಗ್ನೇಯಕ್ಕೆ ಹಬ್ಬಿರುವ ಬೆಟ್ಟಗಳ ನಡುವೆ ಗೋದಾವರಿ ಹಾಗೂ ಭೀಮಾ ನದಿಗಳ ಜಲಾನಯನ ಭೂಮಿಯೂ ಅಹಮದ್‍ನಗರ ಭಾಗದ ಸಮತಲ ಭೂಮಿಯೂ ಇವೆ. ಕಮಾಲಗಢದವರೆಗೆ ಪೂರ್ವಕ್ಕೂ ಅಲ್ಲಿಂದ ದಕ್ಷಿಣಕ್ಕೂ ಸಾಗಿ, ಆತ್‍ಪಾಡಿ ಮತ್ತು ಜಾತ್‍ಗಳು ಮೂಲಕ ಭೀಮಾ ಮತ್ತು ಕೃಷ್ಣಾ ನದಿಗಳು ನಡುವಣ ಜಲಾನಯನ ಪ್ರದೇಶದ ವರೆಗೆ ಮಹಾದೇವೋ ಬೆಟ್ಟಸಾಲು ಹಬ್ಬಿದೆ.

	ಮಹಾರಾಷ್ಟ್ರದ ಕಡೆ ಪಶ್ಚಿಮ ಘಟ್ಟಗಳಲ್ಲಿ ಮೂರನೆ ಭೂಯುಗದ ಶಿಲಾಪದರಗಳು, ಅಗ್ನಿಶಿಲೆ, ಪುಡಿಗಟ್ಟುವ ಕೆಂಪು ಜೇಡುಶಿಲೆ, ಬೆಣಚು ಹಾಗೂ ಮರಳುಗಲ್ಲು ಇವೆ. ಗಿರಿಗಳ ಚಪ್ಪಟೆಯ ತುದಿಗಳಲ್ಲಿ ಗೋಡಿಗಳಂತಿರುವ ಜಂಬುಮಣ್ಣಿನ ಪದರುಗಳು ಇಲ್ಲವೇ ಅಗ್ನಿಶಿಲೆಗಳು ಇವೆ. ತಪ್ಪಲುಗಳು ತೇಗ, ಕರಿಯಮರ ಹಾಗೂ ಬಿದಿರಿನ ದಟ್ಟಡವಿಗಳಿಂದ ಕೂಡಿವೆ.

	ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚು ಕಣಿವೆ ಮಾರ್ಗಗಳಿರುವುದು ಮಹಾರಾಷ್ಟ್ರದಲ್ಲಿ. ಈ ಕಣಿವೆ ದಾರಿಗಳನ್ನು ರಕ್ಷಿಸಲು ಕಟ್ಟಿದ, ಹಾಗೂ ಮರಾಠದ ಇತಿಹಾಸದಲ್ಲಿ ಪ್ರಸಿದ್ಧವಾದ ಅನೇಕ ಗಿರಿದುರ್ಗಗಳಿವೆ. ಇಲ್ಲಿಯ ಮುಖ್ಯವಾದ ಕಣಿವೆ ದಾರಿಗಳು ಇವು : 1 ಬ್ರೋಚ್ ಮತ್ತು ದಖನ್ ನಡುವಣ ಕುಂದೈಬಾರಿ ಕಣಿವೆ ಮಾರ್ಗ. ಇದು ಪ್ರಾಚೀನ ವಾಣಿಜ್ಯ ಮಾರ್ಗ. 2 ಬಾಬುಲ್ನಾ ಕಣಿವೆ ಮಾರ್ಗ. ಇದರ ರಕ್ಷಣೆಗಾಗಿ ಕಟ್ಟಿದ ದುರ್ಗಗಳು ಸಾಲ್‍ಹರ್ ಮತ್ತು ಮುಲ್‍ಹರ್ 3 ಗೋದಾವರಿಯ ಉಗಮಸ್ಥಾನದ ಬಳಿಯ ತ್ರಿಯಂಬಕ್ ಕಣಿವೆ ಮಾರ್ಗ. 4 ಮುಂಬಯಿ-ಆಗ್ರ ರಸ್ತೆ ಹಾಗೂ ಪಶ್ಚಿಮ ಭಾರತದ ರೈಲುಮಾರ್ಗ ಸಾಗಿರುವ ಥಾಲ್ ಕಣಿವೆಮಾರ್ಗ. 5 ನಾಸಿಕ್ ಮತ್ತು ಕಲ್ಯಾಣ್ ನಡುವಣ ಹಳೆಯ ಪಿಂಪ್ರಿ ಘಾಟ್ ಮಾರ್ಗ. ಈ ಮಾರ್ಗವನ್ನು ರಕ್ಷಿಸಲು ಕಟ್ಟಿದ ಕೋಟೆಗಳು ಆಲಂಗ್ ಮತ್ತು ಕೂಲಂಗ್. 6 ಹರಿಶ್ಚಂದ್ರಗಢ (1,370 ಮೀ). 7 ಜುನ್ನಾರ್ ಮತ್ತು ಕೊಂಕಣದ ನಡುವಣ ನಾನಾ ಕಣಿವೆ ಮಾರ್ಗ. 8 ಶಿವನೇರುದುರ್ಗ. 9 ಭೀಮಾ ನದಿಯ ಉಗಮಸ್ಥಳಕ್ಕೆ ಸಮೀಪದಲ್ಲಿರುವ ಭೀಮಶಂಕರ್ ದುರ್ಗ. 10 ಚಕನ್ ಕೋಟೆ. 11 ಮುಂಬಯಿ-ಪುಣೆ ರಸ್ತೆ ಹಾಗೂ ಪಶ್ಚಿಮ ಭಾರತದ ರೈಲುಮಾರ್ಗ ದಖನ್ ಕಡೆಗೆ ಸಾಗುವ ಭೋರ್ ಅಥವಾ ಖಂಡಾಲ. 12 ವಾಗೀ ಘಾಟ್. 13 ಪುಣೆಯ ದಕ್ಷಿಣದ ಬೆಟ್ಟ ಚಾಚುಗಳಲ್ಲಿ ಸಿಂಹಗಢ ಹಾಗೂ ಪುರಂದರಗಢ ಕೋಟೆಗಳು. 14 ಕೊಂಕಣ ಭಾಗದ ರಾಜಗಢ ಮತ್ತು ಪಾರ್ ಘಾಟ್. ಇಲ್ಲಿ ಪ್ರತಾಪಗಢ ಕೋಟೆಯಿದೆ. 15 ಕೃಷ್ಣ ನದಿಯ ಉಗಮಸ್ಥಳದಲ್ಲಿರುವ ಬಲೇಶ್ವರ ಗಿರಿಧಾಮ (1,438 ಮೀ.) 16 ಸಾತಾರಾ ಕೋಟೆ. 17 ಪ್ರಾಚೀನ ನಗರವಾದ ಕರಾಡ್ ಕಡೆ ಹೋಗುವ ಕುಂಭರ್ಲಿ ಘಾಟ್. 18 ರತ್ನಗಿರಿಯಿಂದ ಕೊಲ್ಹಾಪುರಕ್ಕೆ ಹೋಗುವ ಅಂಬಾ ಕಣಿವೆ. 19 ವಿಶಾಲಗಢ ಹಾಗೂ ಪನ್ಹಾಲ ದುರ್ಗಗಳು. 20 ದೇವಗಢಕ್ಕೂ ಬೆಳಗಾಂವಿ ಜಿಲ್ಲೆಯ ನಿಪ್ಪಾಣಿಗೂ ನಡುವಣ ಘೋಂಡಾ ಕಣಿವೆಮಾರ್ಗ. 21 ವೆಂಗೂರ್ಲ ಹಾಗೂ ಬೆಳಗಾಂವಿ ನಡುವಣ ಅಂಬೋಲಿ ಮತ್ತು ರಾಮ್ ಕಣಿವೆಗಳು.

	ಗೋವೆಯ ಪಶ್ಚಿಮಕ್ಕೆ ಇರುವ ಸಮುದ್ರವನ್ನು ಬಿಟ್ಟರೆ ಉಳಿದ ಮೂರು ಕಡೆಗಳಲ್ಲಿ ಪಶ್ಚಿಮ ಘಟ್ಟಗಳು ಸುತ್ತುವರಿದಿವೆ. ಮಾರ್ಮಗೋವದಿಂದ ಧಾರಾವಾಡಕ್ಕೆ ಹೋಗುವ ರೈಲುಮಾರ್ಗ ಕ್ಯಾಸಲ್‍ರಾಕ್ ಅಂಚಿನಲ್ಲಿ ಸಾಗಿದೆ. ಮಹಾರಾಷ್ಟ್ರದಿಂದ ಗೋವದವರೆಗೆ ಅನೇಕ ಕಣಿವೆ ಮಾರ್ಗಗಳಿದ್ದರೂ ಕರ್ನಾಟಕ ಹಾಗೂ ಕೇರಳ ಭಾಗಗಳಲ್ಲಿ ಕಣಿವೆ ದಾರಿಗಳು ಕಡಿಮೆ. ಕರ್ನಾಟಕದಲ್ಲಿ ಕಾರವಾರ ಹಾಗೂ ಧಾರವಾಡಗಳ ನಡುವಣ ಅರಬೈಲು ಕಣಿವೆ, ಕುಮಟಾ-ಹುಬ್ಬಳ್ಳಿ ನಡುವಣ ದೇವಿಮನೆ ಕಣಿವೆ, ಶಿವಮೊಗ್ಗ ಜಿಲ್ಲೆಯಲ್ಲಿ ಕೊಡಚಾದ್ರಿಯ ಉತ್ತರಕ್ಕೆ ಕೊಲ್ಲೂರು ಘಾಟ್, ಹೈದರ್ (ಹೊಸಂಗಡಿ) ಘಾಟ್ ಹಾಗೂ ಆಗುಂಬೆ ಘಾಟ್, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭೂಂದ್ ಘಾಟ್, ಹಾಸನ ಜಿಲ್ಲೆಯಲ್ಲಿ ಹಾಸನಕ್ಕೂ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ಮಂಜರಾಬಾದ್ ಘಾಟ್ ಹಾಗೂ ಬಿಸಲೆ ಘಾಟ್-ಇವೆಲ್ಲವೂ ಪಶ್ಚಿಮ ಘಟ್ಟಗಳ ಪೂರ್ವದ ಸ್ಥಳಗಳಿಗೂ ಪಶ್ಚಿಮದ ಕರಾವಳಿ ಸ್ಥಳಗಳಿಗೂ ಸಂಬಂಧ ಕಲ್ಪಿಸಿವೆ.

	ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ತಾಲ್ಲೂಕಿನ ಪಶ್ಚಿಮದ ಗೋವರ್ಧನ ಗಿರಿಯಿಂದ ದೇವರಕೊಂಡದ ವರೆಗೆ ಪಶ್ಚಿಮ ಘಟ್ಟಗಳ ಸಾಲು ಸಮುದ್ರದಂಚಿಗೆ 16 ಕಿಮೀ. ಅಂತರದಲ್ಲಿದೆ ; ಅಲ್ಲಿಂದ ಆಗ್ನೇಯದ ಕಡೆಗೆ ಸಾಗಿ ಚಿಕ್ಕಮಂಗಳೂರು ಜಿಲ್ಲೆಯ ನೈಋತ್ಯದಲ್ಲಿ ಕುದುರೆಮಖದ ಕಡೆ ಹಬ್ಬಿದೆ. ಈ ಭಾಗ ಕೃಷ್ಣಾ ಹಾಗೂ ಕಾವೇರಿ ನದಿಗಳ ಉಪನದಿಗಳ ಹರಿವಿನ ಪ್ರದೇಶ. ಅಲ್ಲಿಂದ ಮುಂದಕ್ಕೆ ಘಟ್ಟಗಳ ಸಾಲು ಕೊಡಗಿನ ಕಡೆ ಮುಂದುವರಿದು ಸಮುದ್ರದಂಚಿಗೆ 72 ಕಿಮೀ. ದೂರದಲ್ಲಿದೆ. ಇಲ್ಲೂ ಪ್ರಧಾನ ಶ್ರೇಣಿಯಿಂದ ಉಪಶ್ರೇಣಿಗಳ ಪೂರ್ವಕ್ಕೆ ಹರಡಿಕೊಂಡಿವೆ. ಶಿವಮೊಗ್ಗ ಜಿಲ್ಲೆಯ ಕವಲೆದುರ್ಗದಲ್ಲಿ ಶರಾವತಿ ಉದ್ಭವಿಸಿ. ಹರಿದ್ರಾ ನದಿಯೊಂದಿಗೆ ಕೂಡಿ, ಜೋಗದಲ್ಲಿ ಧುಮುಕಿ, ಪಶ್ಚಿಮ ಘಟ್ಟಗಳನ್ನು ಹಾದು ಹೊನ್ನಾವರದ ಬಳಿ ಸಮುದ್ರಕ್ಕೆ ಬೀಳುತ್ತದೆ. ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳ ಕವಲುಗಳು ಕೊಡಚಾದ್ರಿ (1,343 ಮೀ.), ಗೋವರ್ಧನಗಿರಿ ಮತ್ತು ಚಂದ್ರಗುತ್ತಿ (852 ಮೀ.). ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ಬಹಳ ಎತ್ತರವಾಗಿವೆ. ಅಲ್ಲಿಯ ಪ್ರಧಾನ ಬೆಟ್ಟಗಳು ಮೆತ್ರಿ (ಮೇರುತಿ) ಗುಡ್ಡ (1,661 ಮೀ.), ವರಾಹ ಪರ್ವತ (1,457 ಮೀ.) ಮುಳ್ಳಯ್ಯನಗಿರಿ (1,938 ಮೀ.), ಕಲ್ಹತ್ತಗಿರಿ (1,876 ಮೀ.), ಮತ್ತು ಕುದುರೆಮುಖ (1,894 ಮೀ.). ಶೃಂಗಗಿರಿಯ ತಪ್ಪಲಿನಲ್ಲಿ ಶೃಂಗೇರಿ ಕ್ಷೇತ್ರವಿದೆ. ಹಾಸನ ಜಿಲ್ಲೆಯ ಮಂಜರಾಬಾದ್ ತಾಲ್ಲೂಕು ಪಶ್ಚಿಮ ಘಟ್ಟಗಳ ಅಂಚಿನಲ್ಲಿದೆ. ಮಂಜರಾಬಾದ್ ಘಾಟ್ ರಸ್ತೆ ಹಾಸನ ಮತ್ತು ಕೊಡಗು, ಮಂಗಳೂರು ಮೊದಲಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದೆ. 1979ರಲ್ಲಿ ಹೊಸದಾಗಿ ತೆರೆದ ಹಾಸನ-ಮಂಗಳೂರು ರೈಲುಮಾರ್ಗ ಇದೇ ಘಾಟ್ ಮೂಲಕ ಸಾಗಿದೆ. ಕೊಡಗಿನ ಉತ್ತರದಲ್ಲಿರುವ ಪುಷ್ಪಗಿರಿ ಅಥವಾ ಸುಬ್ರಮಣ್ಯ ಸಮುದ್ರಮಟ್ಟಕ್ಕೆ 1,715 ಮೀ. ಎತ್ತರದಲ್ಲಿದೆ. ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಪಶ್ಚಿಮ ಘಟ್ಟಗಳು ದಕ್ಷಿಣದ ತಮಿಳು ನಾಡು ಹಾಗೂ ಕೇರಳ ರಾಜ್ಯಗಳ ಕಡೆಗೆ ಮುಂದುವರಿಯುತ್ತವೆ.

	ಕೊಡಗನ್ನು ಬಿಟ್ಟ ಕೂಡಲೆ ಘಟ್ಟಗಳ ಸಾಲುಗಳು ಪೂರ್ವಭಾಗದಿಂದ ಹಬ್ಬಿದ ಪೂರ್ವ ಘಟ್ಟಗಳೊಂದಿಗೆ ಸೇರುತ್ತವೆ. ಅವು ಸಂಧಿಸುವ ಕಡೆ ಎತ್ತರಕ್ಕೆ ನಿಂತಿರುವ ಬೆಟ್ಟಗಳು ನೀಲಮಲೆ ಅಥವಾ ನೀಲಗಿರಿ. ಈ ಬೆಟ್ಟಗಳಲ್ಲಿ ತಮಿಳು ನಾಡಿನ ಗಿರಿಧಾಮವಾದ ಉದಕಮಂಡಲ (2,133 ಮೀ.), ಕೂನೂರು (2,133 ಮೀ.), ವೆಲಿಂಗ್ ಡನ್, ಕೋಟಗಿರಿ, ದೊಡ್ಡಬೆಟ್ಟ (2,660 ಮೀ.), ಮಕುರ್ತಿ (2,438 ಮೀ) ಮುಖ್ಯವಾದವು. ನೀಲಗಿರಿಯ ದಕ್ಷಿಣದಲ್ಲಿ ಕೇರಳಕ್ಕೂ ತಮಿಳು ನಾಡಿನ ಕೊಯಮತ್ತೂರಿಗೂ ನಡುವೆ ಪಾಲಫಾಟ್ ತೆರಪು ಇದೆ. ಇದು ಪಶ್ಚಿಮ ಘಟ್ಟಗಳನ್ನು ಅಡ್ಡಲಾಗಿ ಕತ್ತರಿಸಿದಂತೆ ಇದೆ. ಈ ತೆರಪಿನ ಅಗಲ 27 ಕಿಮೀ. ಕಣಿವೆ ದಾರಿಗಳನ್ನು ಬಿಟ್ಟರೆ ಇಡೀ ಪಶ್ಚಿಮ ಘಟ್ಟಗಳ ಶ್ರೇಣಿ ವಿಭಜಿತವಾದಂತೆ ದಾರಿ ಬಿಟ್ಟಿರುವುದು ಇದೊಂದೇ ಕಡೆ. ಪಾಲಘಾಟ್ ತೆರಪು ಸಮುದ್ರಮಟ್ಟಕ್ಕೆ 305 ಮೀ. ಎತ್ತರದಲ್ಲಿದೆ. ಇದರ ಮೂಲಕ ದಕ್ಷಿಣ ರೈಲುಮಾರ್ಗ ಸಾಗಿದೆ. ಈ ತೆರಪಿನಿಂದ ಪಶ್ಚಿಮ ಘಟ್ಟಗಳ ಪೂರ್ವಕ್ಕೂ ಕರಾವಳಿಗೂ ಸಂಪರ್ಕ ಉಂಟಾಗಿದೆ.

	ಪಾಲಘಾಟ್ ತೆರಪಿನ ಅನಂತರ ಪಶ್ಚಿಮ ಘಟ್ಟಗಳು ಹಠಾತ್ತನೆ ಬಹಳ ಎತ್ತರವಾಗಿ ದಕ್ಷಿಣಕ್ಕೆ ಮುಂದುವರಿದಿವೆ. ಅವಕ್ಕೆ ಈ ಭಾಗದಲ್ಲಿ ಅನೈಮಲೈ ಅಥವಾ ಆನೆಬೆಟ್ಟ ಎಂಬ ಹೆಸರುಂಟು. ಇಲ್ಲಿ ಪಶ್ಚಿಮ ಘಟ್ಟಗಳ ಶಾಖೆಗಳು ಪೂರ್ವಕ್ಕೂ ಪಶ್ಚಿಮಕ್ಕೂ ವ್ಯಾಪಿಸಿವೆ. ಪಶ್ಚಿಮಕ್ಕೆ ವ್ಯಾಪಿಸಿರುವ ಬೆಟ್ಟ ನೆಲ್ಲಿಯಂಪತ್ತಿ ; ಪೂರ್ವಕ್ಕೆ ವ್ಯಾಪಿಸಿರುವುದು ಪಳನಿಮಲೈ. ಪಳನಿ ಬೆಟ್ಟಗಳಲ್ಲಿ ಕೊಡೈಕ್ಯಾನಾಲ್ ಗಿರಿಧಾಮವಿದೆ. ಮುಂದೆ ಕೇರಳದ ಕಡೆಗೆ ದಕ್ಷಿಣಕ್ಕೆ ಹಬ್ಬಿರುವ ಪಶ್ಚಿಮ ಘಟ್ಟಗಳು ಕನ್ಯಾಕುಮಾರಿ ಬಳಿ ಭಾರತದ ದಕ್ಷಿಣ ತುದಿಯಲ್ಲಿ ಮುಕ್ತಾಯಗೊಳ್ಳುತ್ತವೆ.

	ಪಾಲಘಾಟ್ ತೆರಪಿನ ಮಾರ್ಗವಲ್ಲದೆ ಕೇರಳದ ಕ್ವಿಲಾನ್‍ನಿಂದ ತಮಿಳು ನಾಡಿನ ತಿನ್ನವೆಲ್ಲಿ ವರೆಗೆ ಹಾಕಿರುವ ರೈಲು ಮತ್ತು ರಸ್ತೆಮಾರ್ಗಗಳು ಭಾರತ ಪರ್ಯಾಯ ದ್ವೀಪದ ಪಶ್ಚಿಮ ಹಾಗೂ ಪೂರ್ವ ತೀರಗಳಿಗೆ ಸಂಪರ್ಕ ಕಲ್ಪಿಸಿವೆ. ಕಣ್ಣನ್ನೂರು ಹಾಗೂ ತೆಲಿಚ್ಚೇರಿಯಿಂದ ಕರ್ನಾಟಕದ ಬಯಲು ಸೀಮೆಗೆ ಪೆರುಂಬಾಡಿ ಮತ್ತು ಪೆರಿಯಕಣಿವೆ ಮಾರ್ಗಗಳಿವೆ. ಕೋಜಿಕೊಡಿ ನಿಂದ ನೀಲಗಿರಿಗೆ ವೈಯತ್ತಿರಿ-ಗೂಡಲೂರು ಘಾಟ್ ಮಾರ್ಗವಿದೆ.

	ಪಶ್ಚಿಮ ಘಟ್ಟಗಳಲ್ಲಿ ಮನಮೋಹಕ ನೈಸರ್ಗಿಕ ದೃಶ್ಯಗಳಿವೆ. ಕರ್ನಾಟಕದ ಆಗುಂಬೆ ಘಾಟಿನ ಸೂರ್ಯಾಸ್ತದ ನೋಟ ಸುಂದರವಾದ್ದು. ಜೂನ್-ಸೆಪ್ಟೆಂಬರ್ ನಡುವೆ ಮುಂಗಾರು ಮಳೆ. ಕೇರಳ, ನೀಲಗಿರಿ, ಚಿಕ್ಕಮಂಗಳೂರು, ಶಿವಮೊಗ್ಗ ಪ್ರದೇಶಗಳ ದಟ್ಟಡವಿಗಳ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತದೆ. ಆಗುಂಬೆಯಲ್ಲಿ ಅತ್ಯಂತ ಹೆಚ್ಚು ಮಳೆಯಾಗುತ್ತದೆ. ಪಶ್ಚಿಮಘಟ್ಟಗಳ ಉದ್ದಕ್ಕೂ ನಿತ್ಯ ಹಸುರಿನ ಕಾಡುಗಳಿವೆ. ದಟ್ಟಡವಿಗಳ ಬಿದಿರು, ತೇಗ, ಹೊನ್ನೆ, ಶ್ರೀಗಂಧ ಮೊದಲಾದ ಮರಗಳಿವೆ. ಚಿಕ್ಕಮಂಗಳೂರು ಜಿಲ್ಲೆಯಿಂದ ಕೇರಳದವರೆಗೆ ಕಾಫಿ, ಚಹ, ಏಲಕ್ಕಿ, ಬಾಳೆ, ಮೆಣಸು, ಗೋಡಂಬಿ ಬೆಳೆಗಳಾಗುತ್ತವೆ. ಇಲ್ಲಿಯ ವನ್ಯಮೃಗಗಳು ಕಾಡುಕೋಣ, ಹುಲಿ, ಆನೆ, ಜಿಂಕೆ, ಡೊಂಕು ಕೊಂಬಿನ ನೀಲಗಿರಿ ಕಾಡುಕುರಿ.

	ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಅನೇಕ ರಾಜ್ಯಗಳು ಸ್ಥಾಪಿತವಾಗಿದ್ದುವು. ಸಾತಾರಾ ಮತ್ತು ಕೊಲ್ಹಾಪುರಗಳಲ್ಲಿ ಮರಾಠರು, ಕೊಂಕಣದಲ್ಲಿ ಸಿಲ್ಹಾರರು, ನಾಸಿಕ್ ಪುಣೆ ಬನವಾಸಿ ಭಾಗಗಳಲ್ಲಿ ಚಾಟು ಸಾತಕುರ್ಣಿ ಅಥವಾ ಚಾಟುನಾಗರು (3ನೆಯ ಶ.) ನಾಸಿಕ್ ಜಿಲ್ಲೆಯ ಮಯೂರಖಿಂಡಿ ಮತ್ತು ತರುವಾಯ ಆಂಧ್ರದ ಮಾನ್ಯ-ಖೇಟಗಳಲ್ಲಿ (ಈಗಿನ ಮಾಲಖೇಡ್) ರಾಷ್ಟ್ರಕೂಟರು, ಬನವಾಸಿಯಲ್ಲಿ ಕದಂಬರು, ಕೊಡಗಿನಲ್ಲಿ ಕೊಂಗಾಳ್ವ, ಚೆಂಗಾಳ್ವ ಹಾಗೂ ಕೊಡಗಿನ 17 ಹಾಗೂ 18ನೆಯ ಶತಮಾನಗಳ ರಾಜರು, ಮೂಡಗೆರೆ ತಾಲ್ಲೂಕಿನ ಸೊಸೆವೂರಿನಲ್ಲಿ (ಅಂಗಡಿ) ಹೊಯ್ಸಳರು, ಪಶ್ಚಿಮ ಘಟ್ಟಗಳವರೆಗೆ ವಿಜಯನಗರ ಸಾಮ್ರಾಟರು, ಪೊಂಬುಚ್ಚದಲ್ಲಿ (ನಗರ ತಾಲ್ಲೂಕು ಹುಂಚ) ಆಳುಪರು, ಕಾರ್ಕಳ ಉಲ್ಲಾಳ ಗೇರುಸೊಪ್ಪೆ ಮೊದಲಾದ ಸ್ಥಳಗಳಲ್ಲಿ ಜೈನ ಅರಸರಲ್ಲಿ, ಕೆಲವರು ಶಿವಮೊಗ್ಗ ಜಿಲ್ಲೆಯ ಬಿದನೂರಿನಲ್ಲಿ ಇಕ್ಕೇರಿಯ ನಾಯಕರು, ಸೇಲಂ ಕೊಯಮತ್ತೂರು ಭಾಗಗಳಲ್ಲಿ, ಪಶ್ಚಿಮ ಗಂಗರು, ವಂಜಿಯಲ್ಲಿ (ಈಗಿನ ತಿರುವನಂತಪುರ) ಕೇರಳದ ಚೇರರು ತಂತಮ್ಮ ಪ್ರಭುತ್ವಗಳನ್ನು ಸ್ಥಾಪಿಸಿಕೊಂಡಿದ್ದರು.

	ಪಶ್ಚಿಮ ಘಟ್ಟಗಳು ಸುಲಭವಾಗಿ ದಾಟಲಾಗದ ಗೋಡೆಗಳಂತಿರುವುದರಿಂದ ಪಶ್ಚಿಮ ಕರಾವಳಿಯೊಂದಿಗೆ ಪೂರ್ವಭಾಗದ ಮೇಲೆ ಹಾಗೂ ಬಯಲುಸೀಮೆಗಳ ಕರಾವಳಿಯ ಸಂಪರ್ಕವಿಲ್ಲದ ಅಲ್ಲಿಯ ಜನರು ಪ್ರಾಚೀನ ಕಾಲದಿಂದ ತಮ್ಮವೇ ಸಂಸ್ಕøತಿ ಭಾಷೆ ಹಾಗೂ ಆಚಾರಗಳನ್ನು ಬೆಳಸಿಕೊಂಡರು ಹೀಗಾಗಿ ಮಹಾರಾಷ್ಟ್ರ, ಕೊಂಕಣ, ತುಳು, ಮಲೆಯಾಳ ಹಾಗೂ ಕೊಡಗಿನ ಜನರ ಭಾಷೆಗಳೂ ನಡೆನುಡಿಗಳು ವೈಶಿಷ್ಟ್ಯಪೂರ್ಣವಾಗಿವೆ. ಅಳಿಯಸಂತಾನ ಪದ್ಧತಿ ತುಳುನಾಡಿನಿಂದ ದಕ್ಷಿಣದ ಕೇರಳದ ವರೆಗೆ ಹಬ್ಬಿತು. ನೀಲಗಿರಿಯಲ್ಲಿ ತೋಡರು ಕರುಂಬರು, ಆನೈಮಲೈ ಅರಣ್ಯಗಳಲ್ಲಿ ಕಾಡರು, ಕರ್ನಾಟಕದ ಭಾಗದಲ್ಲಿ ಲಂಬಾಣಿ ಮೊದಲಾದ ಆದಿವಾಸಿಗಳು ವಾಸಿಸುತ್ತಾರೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ